ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬನ್ಧೂನವಸ್ಥಿತಾನ್ ॥೨೭॥
ಕೃಪಯಾ ಪರಯಾssವಿಷ್ಟೋ ವಿಷೀದನ್ನಿದಮಬ್ರವೀತ್ ।
ತಾನ್ ಸಮೀಕ್ಷ್ಯ ಸಃ ಕೌಂತೇಯಃ ಸರ್ವಾನ್ ಬಂಧೂನ್ ಅವಸ್ಥಿತಾನ್
ಕೃಪಯಾ ಪರಯಾ ಆವಿಷ್ಟಃ ವಿಷೀದನ್ ಇದಮ್ ಅಬ್ರವೀತ್
-ಆ ಎಲ್ಲಾ ಬಂಧುಗಳು ಒಂದೆಡೆ ಸೇರಿರುವುದನ್ನು ಕಂಡ ಅರ್ಜುನ ಕಡು ಕರುಣೆಗೊಳಗಾಗಿ,ಭಾವಪರವಶನಾಗಿ -ಹೀಗೆ ಹೇಳಿದನು
ಆ ಎಲ್ಲಾ ಬಂಧುಗಳು ಒಂದುಗೂಡಿರುವುದನ್ನು ಕಂಡ ಅರ್ಜುನ, ಕರುಣೆಗೊಳಗಾಗಿ, ಕಾರುಣ್ಯದಿಂದ, ದುಖಃದಿಂದ, ತನ್ನ ತುಮುಲವನ್ನು ಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ಅಳಲನ್ನು ಶ್ರೀಕೃಷ್ಣನ ಮುಂದೆ ತೊಡಿಕೊಳ್ಳುವುದನ್ನು ಕಾಣುತ್ತೇವೆ. ಮುಂದಿನ ಶ್ಲೋಕಗಳನ್ನು ನೋಡುವ ಮೊದಲು ಇಲ್ಲಿ ಒಂದು ಪುಟ್ಟ ವಿಶ್ಲೇಷಣೆ ಮಾಡೋಣ. ಗೀತೆಯನ್ನು ಓದುವಾಗ ಕೆಲವರಿಗೆ ಶ್ರೀಕೃಷ್ಣನ ನಡೆ ಅರ್ಥವಾಗುವುದಿಲ್ಲ. "ಅಯ್ಯೋ- ಹೇಗೆ ನನ್ನ ಬಂಧುಗಳ ವಿರುದ್ಧ ಹೋರಾಡಲಿ" ಎಂದು ಅರ್ಜುನ ಕೇಳಿದರೆ, ಕೃಷ್ಣ "ಯುದ್ಧ ಮಾಡು" ಎಂದು ಹೇಳುತ್ತಾನೆ. ಇದು ನ್ಯಾಯವೇ ಎನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಅರ್ಜುನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಮಾತನ್ನು ಹೇಳಿದ್ದರೆ ಖಂಡಿತವಾಗಿ ನಾವು ಒಪ್ಪಬೇಕಾದ ವಿಷಯವಿದು. ಆದರೆ ಇಲ್ಲಿ ಆತ ಭರತಖಂಡದ ರಕ್ಷಕನಾಗಿ ಧರ್ಮದ ಪರ ಹೋರಾಟಮಾಡಲು ಧರ್ಮರಾಯನ ಪರ ನಿಂತ ಅರಸ. ಆತ ಒಂದು ವೇಳೆ "ನಮಗೋಸ್ಕರ ಭರತ ಖಂಡದ ಜನರು ಸಾಯುವುದು ಬೇಡ" ಎಂದಿದ್ದರೆ ಒಪ್ಪಬಹುದಿತ್ತು. ಆದರೆ ಆತ ಹಾಗೆ ಹೇಳಲಿಲ್ಲ. ಆತನಿಗೆ ಅಲ್ಲಿ ಕಾಣಿಸಿದ್ದು ಕೇವಲ ಬಂಧುಗಳು. ರಾಜನಾದವನಿಗೆ ಧರ್ಮದ ಕಡೆ ನಿಂತವನು ಮಾತ್ರ ಬಂಧು. ಧರ್ಮದ ವಿರುದ್ಧ ಯಾರೇ ನಿಂತಿರಲಿ ಆತ ಕೇವಲ ಅಪರಾಧಿ. ಅವರನ್ನು ಶಿಕ್ಷಿಸುವುದು ರಾಜನ ಪರಮ ಧರ್ಮ. ನ್ಯಾಯ ಸ್ಥಾನದಲ್ಲಿ ನಿಂತ ನ್ಯಾಯಾಧೀಶ, ಅನ್ಯಾಯ ಮಾಡಿ ಬಂದ ತನ್ನ ಬಂಧುವನ್ನು 'ನನ್ನ ಕಡೆಯವನು' ಎಂದು ಹೇಗೆ ಕ್ಷಮಿಸುವಂತಿಲ್ಲವೋ, ಹಾಗೆ ರಾಜನಾದವನೂ ಕೂಡಾ.
ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ವಿತಂಡವಾದದಿಂದ(Arguments) ಶ್ರೀಕೃಷ್ಣನನ್ನು ಸಮಜಾಯಿಸಲು (Convince) ನೋಡುತ್ತಾನೆ. ಆದರೆ ಶ್ರೀಕೃಷ್ಣ ಎಲ್ಲೂ ಈ ವಿತಂಡವಾದಕ್ಕೆ ನೇರ ಉತ್ತರ ಕೊಡುವುದಿಲ್ಲ. ಏಕೆಂದರೆ ಒಂದು ವೇಳೆ ಹಾಗೆ ಮಾಡಿದ್ದರೆ ಆತ ಬೇಡವಾದ ವಾದಕ್ಕೆ ಮಣೆ ಹಾಕಿದಂತಾಗುತ್ತಿತ್ತು. ಒಬ್ಬ ಉತ್ತಮ ಕೇಳುಗನಂತೆ ಎಲ್ಲವನ್ನೂ ಕೇಳಿ, ಆ ನಂತರ ಒಬ್ಬ ಮಾನಸಿಕ ರೋಗಿಗೆ ಚಿಕಿತ್ಸೆ ಕೊಡುವ ರೀತಿಯಲ್ಲಿ ಕೃಷ್ಣ ನಡೆದಿರುವುದನ್ನು ಇಲ್ಲಿ ನಾವು ಕಾಣುತ್ತೇವೆ. ಬನ್ನಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶ್ಲೋಕವನ್ನು ನೋಡೋಣ.
0 Comments